Kpsc Notification 2017 | ಅಂಧರಿಗೆ ಸಂಕಟ ತಂದ ಕೆಪಿಎಸ್‌ಸಿ ನಿಯಮ

KPSC News

Kpsc Notification 2017 know about it

ಪ್ರಮೋದ ಹರಿಕಾಂತ ಬೆಳಗಾವಿ

Kpsc Notification 2017 ಮುಖ್ಯ ಪರೀಕ್ಷೆ ವೇಳಾಪಟ್ಟಿ ಘೋಷಣೆಗೂ ಮೊದಲೇ ಅರ್ಜಿ ಜತೆ ಲಿಪಿಕಾರರ (ಸ್ಕ್ರೈಬ್‌) ಮಾಹಿತಿ ನೀಡಬೇಕು ಎನ್ನುವ ಕೆಪಿಎಸ್‌ಸಿ (ಕರ್ನಾಟಕ ಲೋಕ ಸೇವಾ ಆಯೋಗ) ಹೊಸ ನಿಯಮ ಅಂಧ ಅಭ್ಯರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅ.16 ಕೊನೇ ದಿನ. ಸೆ.25ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಇನ್ನೂ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡದ ಕೆಪಿಎಸ್‌ಸಿ, ನವೆಂಬರ್‌ ಕೊನೆ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಮುಖ್ಯ ಪರೀಕ್ಷೆ ನಡೆಸುವುದಾಗಿ ಹೇಳಿದೆ.

ಆದರೆ, ಲಿಪಿಕಾರರ ಅಗತ್ಯ ಇರುವ ಅಂಧ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಅರ್ಜಿಯಲ್ಲಿಯೇ ಲಿಪಿಕಾರರ ವಿವರ ನಮೂದಿಸಿ ದೃಢೀಕರಿಸಬೇಕು ಎಂದು ಆಯೋಗ ಹೇಳಿದೆ. ಆಯೋಗದಿಂದ ಯಾವುದೇ ಲಿಪಿಕಾರರ ಸಹಾಯವನ್ನು ಒದಗಿಸುವುದಿಲ್ಲ. ಅಭ್ಯರ್ಥಿಗಳು ಲಿಪಿಕಾರರ ದಾಖಲೆಗಳೊಂದಿಗೆ ಆಯೋಗದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಅಧಿಸೂಚನೆಯಲ್ಲಿ(KPSC Notfication 2017)  ತಿಳಿಸಿದೆ.

ಈ ನಿಯಮ ಅಂಧ ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿದೆ. ಪರೀಕ್ಷೆ ದಿನಾಂಕ ತಿಳಿಯುವ ಮೊದಲೇ ಲಿಪಿಕಾರರಾಗಲು ಯಾರೂ ಸಿದ್ಧರಾಗುತ್ತಿಲ್ಲ. ಒಪ್ಪಿದರೂ, ನೋಂದಾಯಿತ ಲಿಪಿಕಾರರನ್ನು ಕಾರಣಾಂತರದಿಂದ ಬದಲಾಯಿಸುವ ಅವಕಾಶವನ್ನೂ ಆಯೋಗ ಕೊಟ್ಟಿಲ್ಲ. ನೋಂದಾಯಿಸಿದ ಲಿಪಿಕಾರರು ನಂತರದಲ್ಲಿ ಸಮಸ್ಯೆಯಲ್ಲಿ ಸಿಲುಕಿದರೆ ಏನು ಮಾಡುವುದು ಎನ್ನುವ ಚಿಂತೆ ಕಾಡುತ್ತಿದೆ ಎಂದು ಅಭ್ಯರ್ಥಿಯೊಬ್ಬರು ತಿಳಿಸಿದರು.

ಈ ಹಿಂದೆ ಪರೀಕ್ಷಾ ಕೇಂದ್ರದಲ್ಲಿಯೇ ಲಿಪಿಕಾರರ ದಾಖಲೆ ಕೊಟ್ಟು ಪರೀಕ್ಷೆ ಬರೆಯುವ ಅವಕಾಶ ಇತ್ತು. ಕೆಲವೊಮ್ಮೆ ಆಯೋಗವೂ ಲಿಪಿಕಾರರನ್ನು ಒದಗಿಸುತ್ತಿತ್ತು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿಯೂ ಈ ರೀತಿ ಅವಕಾಶ ಇದೆ. ಆದರೆ, ಕೆಪಿಎಸ್‌ಸಿಯ ಈ ಹೊಸ ನಿಯಮಗಳು ಧರ್ಮಸಂಕಟ ತಂದಿರಿಸಿದೆ ಎಂದು ರಾಜ್ಯ ಸರಕಾರಿ ಅಂಧ ನೌಕರರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಎಂ.ಎನ್‌. ಪ್ರಶಾಂತ ತಿಳಿಸಿದರು.

Kpsc Notification 2017

ದೂರದ ಕೇಂದ್ರಗಳು

ಕೆಪಿಎಸ್‌ಸಿ ಮುಖ್ಯ ಪರೀಕ್ಷೆಗಳು ಧಾರವಾಡ ಮತ್ತು ಬೆಂಗಳೂರಿನ ಕೇಂದ್ರಗಳಲ್ಲಿ ನಡೆಯುತ್ತವೆ. ಒಟ್ಟು ಒಂಭತ್ತು ಪತ್ರಿಕೆಗಳಿಗೆ ಸುಮಾರು ಒಂದು ವಾರ ಕಾಲ ಪರೀಕ್ಷೆ ನಡೆಯುತ್ತದೆ. ಇದರ ಜತೆಗೆ ಅಂಧ ಅಭ್ಯರ್ಥಿಗಳು ಪರೀಕ್ಷೆಗೆ ಮುನ್ನ ಎರಡು ದಿನ ಲಿಪಿಕಾರರ ಜತೆ ಭಾಷೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಲಿಪಿಕಾರರು ಸುಮಾರು ಹತ್ತು ದಿನಗಳ ಕಾಲ ದೂರದ ಊರಿನಲ್ಲಿ ಅಭ್ಯರ್ಥಿಗಳ ಜತೆ ಇರಬೇಕಾಗುತ್ತದೆ. ‘ಅಷ್ಟೊಂದು ದಿನಗಳನ್ನು ನಮಗಾಗಿ ಮೀಸಲಿಡುವವರೇ ಸಿಗುವುದು ಕಷ್ಟ. ಅಂಥದರಲ್ಲಿ ತಿಂಗಳ ಮೊದಲೇ ಲಿಪಿಕಾರರಾಗಿ ಭರವಸೆ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಅಲ್ಲದೆ, ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸುತ್ತೇವೆ ಎಂದು ಆಯೋಗ ಹೇಳಿದೆ. ಅಷ್ಟರೊಳಗೆ ಚುನಾವಣೆ ಘೋಷಣೆಯಾದರೆ ನಮ್ಮ ಭವಿಷ್ಯವೇ ಅತಂತ್ರವಾಗಲಿದೆ’ ಎಂದು ಅಭ್ಯರ್ಥಿಯೊಬ್ಬರು ಸಂಕಟ ಹೇಳಿಕೊಂಡರು.

ಪರೀಕ್ಷೆ ದಿನಾಂಕ ತಿಳಿಯುವ ಮೊದಲೇ ಲಿಪಿಕಾರರಾಗಲು ಯಾರೂ ಮುಂದೆ ಬರುತ್ತಿಲ್ಲ. ಅರ್ಜಿ ಸಲ್ಲಿಕೆ ಆರಂಭವಾಗಿ ಈಗಾಗಲೇ 15 ದಿನ ಕಳೆದಿದೆ. ಲಿಪಿಕಾರರು ಸಿಗದೆ ಇನ್ನೂ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಕೆಪಿಎಸ್‌ಸಿ ಮುಖ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು ಎಂದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಭ್ಯರ್ಥಿ ಎಂ.ಎನ್‌. ಪ್ರಶಾಂತ ಹೇಳಿದರು.

Kpsc Notification 2017

ಅಭ್ಯರ್ಥಿಗಿಂತ ಹೆಚ್ಚಿನ ಶಿಕ್ಷಣ ಪಡೆದ ಲಿಪಿಕಾರರನ್ನು ನೇಮಿಸಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚೆಗೆ ಪತ್ತೆಯಾಗಿವೆ. ಆ ಕಾರಣಕ್ಕೆ ಆಧಾರ್‌ ಸಂಖ್ಯೆ ಸಹಿತ ಲಿಪಿಕಾರರ ಮಾಹಿತಿ ಮೊದಲೇ ನೀಡಬೇಕು ಎಂದು ತಿಳಿಸಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಎನ್‌.ಎಸ್‌. ಪ್ರಸನ್ನಕುಮಾರ ಹೇಳಿದರು.

Leave a Reply

Your email address will not be published. Required fields are marked *